ದೇವರ ಒಡಂಬಡಿಕೆಯ ಪೆಟ್ಟಿಗೆಯನ್ನು ದಾವೀದನು ಕಿರ್ಯತ್ಯಾರೀಮಿನಿಂದ ಜೆರುಸಲೇಮಿಗೆ ತಂದು ಅಲ್ಲಿ ತಾನು ಅದಕ್ಕಾಗಿ ಏರ್ಪಡಿಸಿದ್ದ ಸ್ಥಳದಲ್ಲಿ ಪ್ರತಿಷ್ಠಿಸಿದನು; ಮತ್ತು ಅದಕ್ಕೆ ಗುಡಾರವನ್ನು ನಿರ್ಮಿಸಿದ್ದನು.
ಊರೀಯ ಮಗನೂ ಹೂರನ ಮೊಮ್ಮಗನೂ ಆದ ಬೆಚಲೇಲನು ಮಾಡಿದ ತಾಮ್ರದ ಯಜ್ಞವೇದಿಕೆಯು ಗಿಬ್ಯೋನಿನಲ್ಲಿದ್ದ ಪವಿತ್ರ ಗುಡಾರದ ಮುಂದೆ ಇಡಲ್ಪಟ್ಟಿತ್ತು. ಆದ್ದರಿಂದ ಸೊಲೊಮೋನನೂ ಇಸ್ರೇಲರೂ ಗಿಬ್ಯೋನಿಗೆ ಹೋದರು.
ದೇವರಾದ ಯೆಹೋವನೇ ನೀನು ನನ್ನ ತಂದೆಯಾದ ದಾವೀದನಿಗೆ ಮಾಡಿರುವ ವಾಗ್ದಾನವನ್ನು ನೆರವೇರಿಸು. ಒಂದು ದೊಡ್ಡ ರಾಜ್ಯಕ್ಕೆ ನನ್ನನ್ನು ಅರಸನನ್ನಾಗಿ ನೇಮಿಸಿರುತ್ತೀ. ಅದರಲ್ಲಿ ಭೂಮಿಯ ಧೂಳಿನೋಪಾದಿಯಲ್ಲಿ ಜನರು ತುಂಬಿದ್ದಾರೆ.
ಆಗ ದೇವರು ಸೊಲೊಮೋನನಿಗೆ, “ನಿನ್ನ ಕೋರಿಕೆ ಒಳ್ಳೆಯದಾಗಿದೆ. ನೀನು ಐಶ್ವರ್ಯವನ್ನಾಗಲಿ ಗೌರವವನ್ನಾಗಲಿ ಬೆಳ್ಳಿಬಂಗಾರಗಳನ್ನಾಗಲಿ ಕೇಳಲಿಲ್ಲ. ನಿನ್ನ ವೈರಿಗಳನ್ನು ನಿರ್ಮೂಲ ಮಾಡುವಂತಾಗಲಿ ಅಥವಾ ನಿನಗೆ ದೀರ್ಘಾಯುಷ್ಯವನ್ನು ಕೊಡು ಎಂದಾಗಲಿ ನೀನು ಕೇಳಿಕೊಳ್ಳದೆ ರಾಜ್ಯವನ್ನು ನ್ಯಾಯವಾಗಿ ಆಳಲು ಬೇಕಾದ ಜ್ಞಾನವಿವೇಕಗಳನ್ನು ಕೇಳಿಕೊಂಡೆ. ನಾನು ಆರಿಸಿಕೊಂಡಿರುವ ಜನಾಂಗದ ಮೇಲೆ ಆಡಳಿತ ನಡಿಸುವಾಗ ಯೋಗ್ಯವಾದ ಸಲಹೆ ಕೊಡುವಂತೆ ಜ್ಞಾನವನ್ನು ಕೇಳಿರುತ್ತೀ.
ನಾನು ನಿನಗೆ ಜ್ಞಾನವಿವೇಕಗಳನ್ನು ಕೊಡುವೆನು. ಅದರ ಜೊತೆಯಲ್ಲಿ ನಿನಗೆ ಐಶ್ವರ್ಯವನ್ನೂ ಘನತೆಯನ್ನೂ ದಯಪಾಲಿಸುವೆನು. ನಿನಗಿಂತ ಮುಂಚೆ ಇದ್ದ ಯಾವ ಅರಸನಿಗೂ ಇಂಥಾ ಐಶ್ವರ್ಯಗಳಾಗಲಿ ಘನತೆಯಾಗಲಿ ಇರಲಿಲ್ಲ. ಮತ್ತು ಇನ್ನು ಮುಂದೆಯೂ ಯಾವ ರಾಜನಿಗೂ ಇಂಥಾ ಘನತೆ ಮತ್ತು ಐಶ್ವರ್ಯಗಳಿರುವುದಿಲ್ಲ” ಎಂದು ಹೇಳಿದನು.
ಸೊಲೊಮೋನನು ಕುದುರೆಗಳನ್ನೂ ರಥಗಳನ್ನೂ ಸಂಗ್ರಹಿಸಲು ಪ್ರಾರಂಭಿಸಿ ಒಂದು ಸಾವಿರದ ನಾನೂರು ರಥಗಳನ್ನೂ ಹನ್ನೆರಡು ಸಾವಿರ ರಾಹುತರನ್ನೂ ತನ್ನ ಸೈನ್ಯಕ್ಕೆ ಕೂಡಿಸಿಕೊಂಡನು. ಅವುಗಳನ್ನು ರಥಗಳನ್ನಿಡುವ ನಗರಗಳಲ್ಲಿ ಇರಿಸಿದನು. ಅದರಲ್ಲಿ ಕೆಲವನ್ನು ತನ್ನ ಅರಮನೆಯಿರುವ ಜೆರುಸಲೇಮಿನಲ್ಲಿ ಇರಿಸಿದನು.
ಜೆರುಸಲೇಮಿನಲ್ಲಿ ಸೊಲೊಮೋನನು ಅಪಾರವಾದ ಬೆಳ್ಳಿಬಂಗಾರಗಳನ್ನು ಶೇಖರಿಸಿಟ್ಟಿದನು. ಭೂಮಿಯ ಮೇಲೆ ಕಲ್ಲುಗಳು ಹೇಗಿರುತ್ತವೋ ಅದೇ ರೀತಿಯಲ್ಲಿ ಅವನಲ್ಲಿ ಬೆಳ್ಳಿಬಂಗಾರಗಳಿದ್ದವು. ದೇವದಾರು ಮರಗಳನ್ನೂ ಸೊಲೊಮೋನನು ಶೇಖರಿಸಿಟ್ಟನು. ಪಶ್ಚಿಮದ ಬೆಟ್ಟಪ್ರದೇಶಗಳಲ್ಲಿ ಜಾಲಿಮರಗಳು ಹೇರಳವಾಗಿರುವಂತೆ ದೇವದಾರುಮರಗಳೂ ಹೇರಳವಾಗಿದ್ದವು.
ಸೊಲೊಮೋನನ ವ್ಯಾಪಾರಿಗಳು ಈಜಿಪ್ಟಿನಲ್ಲಿ ಒಂದೊಂದು ರಥಕ್ಕೆ ಏಳು ಕಿಲೋಗ್ರಾಂ ತೂಕದ ಬೆಳ್ಳಿಯನ್ನೂ ಒಂದೊಂದು ಕುದುರೆಗೆ ಎರಡು ಕಿಲೋಗ್ರಾಂ ತೂಕದ ಬೆಳ್ಳಿಯನ್ನೂ ಕೊಟ್ಟು ಖರೀದಿಸಿ ಅವುಗಳನ್ನು ಹಿತ್ತಿಯರ ಅರಸರಿಗೂ ಅರಾಮ್ಯರ ಅರಸರಿಗೂ ಮಾರಿದರು.